ಅಂಕೋಲಾ: ಗಂಗಾವಳಿ ನದಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಪಾತಿ ದೋಣಿಯಲ್ಲಿ ತೆರಳಿದ್ದ ಮೀನುಗಾರ ನಾಪತ್ತೆಯಾಗಿ, 3 ದಿನ ಕಳೆದ ಬಳಿಕ ಮೃತದೇಹವಾಗಿ ಪತ್ತೆಯಾದ ಘಟನೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ದುಬ್ಬನಶಶಿ ಬಳಿ ನಡೆದಿದೆ.ಅಂಕೋಲಾ ತಾಲೂಕಿನ ಸಗಡಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೋಟನ ಕೂರ್ವೆ ನಿವಾಸಿ ಈಶ್ವರ ಲಕ್ಷ್ಮಣ ಹರಿಕಂತ್ರ(44) ಮೃತ ದುರ್ದೈವಿ ಮೀನುಗಾರನಾಗಿದ್ದಾನೆ.
ಆಗಸ್ಟ್ 15 ರಂದು ಗಂಗಾವಳಿ ನದಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದ ಈತ ದೋಣಿ ಸಮೇತ ಕಣ್ಮರೆಯಾಗಿದ್ದ. ಶುಕ್ರವಾರ ತಡರಾತ್ರಿಯಿಂದ ನದಿಯಲ್ಲಿ ಹಾಗೂ ಮಂಜುಗುಣಿ ಹೊನ್ನೇ ಬೈಲ್ ವ್ಯಾಪ್ತಿಯ ಸಮುದ್ರ ಸಂಗಮ ಪ್ರದೇಶ ಮತ್ತಿತರಡೆ ಹುಡುಕಾಟ ನಡೆಸಿದ್ದರೂ ಸುಳಿವು ದೊರೆತಿರಲಿಲ್ಲ.ಈ ನಡುವೆ ಗೋಕರ್ಣ ಸಮೀಪದ ಗಂಗೆ ಕೊಳ್ಳ ಬಳಿ ಆತನ ದೋಣಿ ಮಾತ್ರ ಪತ್ತೆಯಾಗಿತ್ತು. ಹತ್ತಿರದಲ್ಲಿ ತೇಲುತ್ತಿದ್ದ ದೋಣಿಯನ್ನು ಸ್ಥಳೀಯರು ಮೇಲೆತ್ತಿ ಇಟ್ಟಿದ್ದರು.
ಕಣ್ಮರೆ ಯಾದವನಿಗಾಗಿ ಶೋಧಕಾರ್ಯ ಮುಂದುವರಿಸಲಾಗುತ್ತಾದರೂ ಪ್ರಯೋಜನವಾಗಿರಲಿಲ್ಲ. ರವಿವಾರಗೋಕರ್ಣ ಸಮೀಪದ ದುಬ್ಬನ ಶಶಿ ಬಳಿ ಆತ ಮೃತದೇಹವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗೋಕರ್ಣ ಪೊಲೀಸರು,ಮೃತ ದೇಹವನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಹಸ್ತಾಂತರಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ.ಮನೆಗೆ ಆಧಾರವಾಗಿದ್ದ ಈಶ್ವರ ಹರಿಕಂತ್ರ ಈತನ ಅಕಾಲಿಕ ಸಾವಿನ ಸುದ್ದಿ ಕುಟುಂಬಸ್ಥರು ಮತ್ತು ಗ್ರಾಮದಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ. ನೊಂದ ಬಡ ಕುಟುಂಬಕ್ಕೆ ಸರ್ಕಾರ ತುರ್ತಾಗಿ ಯೋಗ್ಯ ಪರಿಹಾರ ನೀಡಿ ಸಂತೈಸ ಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ