ಕುಮಟಾ: ರಾಜ್ಯ ಸರ್ಕಾರದ ಕಂದಾಯ ಸಚಿವರಾದ ಕೃಷ್ಣ ಬೈರೇ ಗೌಡ ಅವರು ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದು ಈ ಸಂದರ್ಭದಲ್ಲಿ ಕುಮಟಾ ಆಡಳಿತ ಸೌಧಕ್ಕೆ ಆಗಮಿಸಿ ತಾಲೂಕ ಕಚೇರಿಯ ರೆಕಾರ್ಡ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಾ ಆಡಳಿತ ಸೌಧಕ್ಕೆ ಆಗಮಿಸಿದ ಸಚಿವರನ್ನು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ವತಿಯಿಂದ ಹಾರ ಹಾಕಿ ಸ್ವಾಗತಿಸಲಾಯಿತು.
ನಂತರ ಸಚಿವರು ತಾಲೂಕು ಕಚೇರಿಯ ರೆಕಾರ್ಡ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಸರ್ಕಾರ ಭೂ ಸುರಕ್ಷಾ ಯೋಜನೆಯ ಅಡಿ ತಾಲೂಕು ಕಚೇರಿಯ ರೆಕಾರ್ಡ್ ರೂಂನಲ್ಲಿ ಇರುವ ಎಲ್ಲಾ ಧಾಖಲಾತಿಗಳನ್ನು ಗಣಕೀಕೃತ ಮಾಡಲು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಸಚಿವರು ಪರಿಶೀಲನೆ ನಡೆಸಿದರು. ಕುಮಟಾ ತಹಶೀಲ್ದಾರರು ಸಚಿವರಿಗೆ ತಮ್ಮ ಕಚೇರಿಯಲ್ಲಿ ಇರುವ ದಾಖಲಾತಿಗಳ ಬಗ್ಗೆ ಮಾಹಿತಿ ನೀಡಿದರು.
ಪ್ರತಿದಿನದಲ್ಲಿ ಗಣಕೀಕೃತವಾಗುವ ಸರಾಸರಿ ದಾಖಲಾತಿಗಳ ಬಗ್ಗೆ ಜಿಲ್ಲಾಧಿಕಾರಿ ಕೆಅವರು ಸಚಿವರಿಗೆ ಮಾಹಿತಿ ನೀಡಿದರು. ಜಿಲ್ಲೆಯ ಎಲ್ಲಾ ತಾಲೂಕುಗಳ ಮಾಹಿತಿಯನ್ನು ಪಡೆದುಕೊಂಡ ಸಚಿವರು ರೆಕಾರ್ಡ ರೂಂನಲ್ಲಿ ಇಟ್ಟಿರುವ ದಾಖಲಾತಿಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವರು ಜನಸಾಮಾನ್ಯರು ತಮ್ಮ ಭೂ ದಾಖಲಾತಿಗಳನ್ನು ಪಡೆಯಲು ತಾಲೂಕು ಕಚೇರಿಗೆ ಬರುವ ಅವಶ್ಯಕತೆ ಇರುವುದಿಲ್ಲ. ತಮ್ಮ ಮನೆಗಳಲ್ಲಿ ಕುಳಿತಲ್ಲಿಯೇ ತಮ್ಮ ಬೆರಳತುದಿಯಲ್ಲಿ ಎಲ್ಲಾ ದಾಖಲಾತಿಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ.
ದಾಖಲಾತಿಗಳನ್ನು ಪಡೆಯುವ ಸಲುವಾಗಿ ಕಚೇರಿಗಳಿಗೆ ಅಲೆಯುವ ಕೆಲಸವನ್ನು ತಪ್ಪಿಸಲು ರಾಜ್ಯ ಸರ್ಕಾರ ಭೂ ಸುರಕ್ಷಾ ಯೋಜನೆಯನ್ನು ತಂದಿದೆ. ಸಲೀಸಾಗಿ ಯಾವುದೇ ಮದ್ಯವರ್ತಿಗಳ ಅವಲಂಬನೆ ಇಲ್ಲದೇ ಶೋಷಣೆಗೆ ಅವಕಾಶ ನೀಡದೆ ತಮ್ಮ ಭೂ ದಾಖಲೆಗಳನ್ನು ಪಡೆಯುವ ಉದ್ದೇಶದಿಂದ ಈ ಯೋಜನೆಯನ್ನು ಜರಿ ಮಾಡಲಾಗಿದೆ. ಇದರಿಂದ ಕೆಲವು ಶಿಥಿಲಾವಸ್ಥೆಗಳಲ್ಲಿರುವ ದಾಖಲಾತಿಗಳನ್ನೂ ಸಹ ಗಣಕೀಕೃತ ಮಾಡಿ ಅವುಗಳು ನಾಶ ಹೊಂದದೇ ಇರುವ ಹಾಗೆ ನೋಡಿಕೊಳ್ಳವ ಉದ್ದೇಶದಿಂದ ಈ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ , ಕುಮಟಾ ತಹಶೀಲ್ದಾರ ಕೃಷ್ಣ ಕಾಮ್ಕರ್, ಹೊನ್ನಾವರ ತಹಶೀಲ್ದಾರ ಪ್ರವೀಣ ಕರಾಂಡೆ, ಕುಮಟಾ ಸಹಾಯಕ ಆಯುಕ್ತರಾದ ಕಲ್ಯಾಣಿ ಕಾಂಬ್ಳೆ, ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ, ಕುಮಟಾ ಹೊನ್ನಾವರ ಶಾಸಕರಾದ ದಿನಕರ ಶೆಟ್ಟಿ, ಶಿರಸಿ ಸಿದ್ದಾಪುರ ಶಾಸಕರಾದ ಭೀಮಣ್ಣ ನಾಯ್ಕ, ಕಾಂಗ್ರೆಸ್ ಮುಖಂಡರಾದ ಭುವನ್ ಭಾಗ್ವತ್, ಹೊನ್ನಪ್ಪ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ