ಕಾರವಾರ: ಗೌರಿ ಗಣೇಶ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲೆಡೆ ಭರದ ತಯಾರಿ ನಡೆಯುತ್ತಿದೆ. ಸರಕಾರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕೆಲ ಕಾನೂನು ಜಾರಿಗೆ ತಂದಿದ್ದು, ಇದನ್ನು ಪಾಲಿಸಬೇಕಿದೆ. ಗಣೇಶ ಮೂರ್ತಿ ತಯಾರಿಕೆ, ವಿಸರ್ಜನೆ , ಮೆರವಣಿಗೆ ಸೇರಿದಂತೆ ಎಲ್ಲಾ ವಿಚಾರಗಳನ್ನು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಸಾರ್ವಜನಿಕವಾಗಿ ಸಂಘ, ಸಂಸ್ಥೆಗಳು ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲು ಸಂಬoಧಪಟ್ಟ ಸ್ಥಳೀಯ ಸಂಸ್ಥೆ, ಪೊಲೀಸ್ ಇಲಾಖೆ, ಅಗ್ನಿಶಾಮಕ, ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅಲ್ಲದೆ, ಸಾರ್ವಜನಿಕವಾಗಿ ಕೂರಿಸುವ ಗಣೇಶ ಮೂರ್ತಿಯನ್ನು ಮಣ್ಣಿನಿಂದಲೇ ತಯಾರಿಸಬೇಕಿದೆ. ವಿಶೇಷವಾಗಿ ಪಿಒಪಿ ಗಣೇಶ ಮೂರ್ತಿಯನ್ನು ನಿಷೇಧಿಸಲಾಗಿದೆ.
ಇಂಥ ಮೂರ್ತಿಗಳು ಕಂಡು ಬಂದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದೆ. ಪರಿಸರ ಸ್ನೇಹಿ ಗಣೇಶೋತ್ಸವವನ್ನು ಉತ್ತೇಜಿಸುವುದು ಮತ್ತು ಜಲಮೂಲಗಳನ್ನು ರಕ್ಷಿಸುವುದು ಮುಖ್ಯ ಉದ್ದೇಶದಿಂದ ಈ ಕೆಳಗಿನ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
ಗಣೇಶ ಚತುರ್ಥಿ ಮಾರ್ಗಸೂಚಿ 2025:
- ಪರಿಸರ ಸ್ನೇಹಿ ಮೂರ್ತಿಗಳು
- ಪಿಓಪಿ ಗಣೇಶ ಮೂರ್ತಿಗಳಿಗೆ ನಿಷೇಧ
- ವಿಸರ್ಜನೆಗೆ ನಿಗದಿತ ಸ್ಥಳ
- ಪರವಾನಗಿ ಕಡ್ಡಾಯ
- ಪ್ಲಾಸ್ಟಿಕ್/ಥರ್ಮಾಕೋಲ್ ನಿಷೇಧ
ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಿದ ಗಣೇಶ ವಿಗ್ರಹಗಳ ತಯಾರಿಕೆ, ಮಾರಾಟ ಮತ್ತು ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ.ಭಕ್ತರು ನೈಸರ್ಗಿಕ ಜೇಡಿಮಣ್ಣು ಮತ್ತು ಪರಿಸರ ಸ್ನೇಹಿ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಮಾತ್ರ ಬಳಸಬೇಕು. ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ಪರಿಸರ ಸ್ನೇಹಿ ಮೂರ್ತಿಗಳನ್ನು ಸರ್ಕಾರವು ನಿಗದಿಪಡಿಸಿದ ವಿಸರ್ಜನಾ ಸ್ಥಳಗಳಲ್ಲಿ ಮಾತ್ರ ವಿಸರ್ಜಿಸಬೇಕಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಸ್ಥಾಪಿಸಲು ಸಂಬoಧಪಟ್ಟ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಪೆಂಡಾಲ್‌ಗಳು ಅಥವಾ ಸಾರ್ವಜನಿಕ ಗಣೇಶೋತ್ಸವ ಸ್ಥಳಗಳಲ್ಲಿ ಪ್ಲಾಸ್ಟಿಕ್, ಥರ್ಮಾಕೋಲ್ ಅಥವಾ ಫ್ಲೆಕ್ಸ್ ಬೋರ್ಡ್ಗಳ ಬಳಕೆಯನ್ನು ಮತ್ತು ರಾತ್ರಿ 10 ಗಂಟೆಯಿoದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್