ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಬಿಸಿಗಾಳಿಯ ಪರಿಸ್ಥಿತಿಗಳು ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ನಾಗರಿಕರಿಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯನ್ವಯ, ತಿಳಿಸಲಾಗಿದೆ. ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ರ ವರೆಗೆ ಬಿಸಿಲಿನಲ್ಲಿ ಹೋಗಬಾರದು. ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಬೇಕು.
ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ. ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ, ಟೋಪಿ ಬೂಟುಗಳು ಅಥವಾ ಚಪ್ಪಲ್‌ಗಳನ್ನು ಬಳಸಿ. ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ ನೀವು ಹೊರಗೆ ಕೆಲಸ ಮಾಡುತ್ತಿದ್ದರೆ ಟೋಪಿ ಅಥವಾ ಒದ್ದೆಯಾದ ಬಟ್ಟೆಯನ್ನು ಬಳಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಕಂಡುಬoದಲ್ಲಿ ತುರ್ತು ಸಹಾಯಕ್ಕಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಸಂಪರ್ಕಿಸುವoತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯೂರೋ ರಿಪೋರ್ಟ, ವಿಸ್ಮಯ ನ್ಯೂಸ್