ಅಂಕೋಲಾ: ಧಾರ್ಮಿಕ, ಸಾಮಾಜಿಕ, ಸಹಕಾರಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡು, ತಂದೆ ದಿ. ಆರ್ ಎನ್ ನಾಯಕರ ಅಪೇಕ್ಷೆಯಂತೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಪಾರ ಅಭಿಮಾನಿಗಳನ್ನು ಹೊಂದಿರುವ ಉದ್ಯಮಿ, ಕುಬೇರ ಗ್ರೂಪ್ಸ್ ಹಾಗೂ ಹಿಮಾಲಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಅರಮನೆಯ ಯುವ ರಾಜ ಎಂಬಷ್ಟರ ಮಟ್ಟಿಗೆ ಜನ ಮನದಲ್ಲಿ ಬೆಳೆಯುತ್ತಿರುವ ಮಯೂರ ಆರ್ ನಾಯಕ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ವಿಶಿಷ್ಟ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು.

ಸಂಗಮ ಪೂಜೆ ನೆರವೇರಿಸಿ ಲೋಕಕಲ್ಯಾಣಕ್ಕೆ ಪ್ರಾರ್ಥನೆ
ಮಯೂರ ನಾಯಕರ ಹುಟ್ಟುಹಬ್ಬದ ನಿಮಿತ್ತ ಗಂಗಾವಳಿ ಮತ್ತು ಅರಬ್ಬೀ ಸಮುದ್ರ ಸಂಗಮ ಪ್ರದೇಶದಲ್ಲಿ ಹಿರಿಯರಿಂದ ಪ್ರಕೃತಿಯ ಮೂಲ ಆರಾಧನೆ ಎಂಬಂತೆ ಸಂಗಮ ಪೂಜೆ ನೆರವೇರಿಸಲಾಯಿತು. ಗಂಗಾವಳಿ ನದಿ ಹಾಗೂ ಅರಬ್ಬೀ ಸಮುದ್ರಕ್ಕೆ ಪೂಜಾ ನಮನ ಸಲ್ಲಿಸಿ ಸಾಂಕೇತಿಕವಾಗಿ ಬಾಗೀನ ಅರ್ಪಿಸಿ ಸಮೃದ್ಧಿ ಹಾಗೂ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.

ಧಾರ್ಮಿಕ ಸಂಭ್ರಮ – ದೇವಾಲಯಗಳಲ್ಲಿ ವಿಶೇಷ ಪೂಜೆ
ನೂರಾರು ಅಭಿಮಾನಿಗಳೊಂದಿಗೆ ಪಟ್ಟಣದ ಕಣಕಣೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಈ ವೇಳೆ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಈ ಹಿಂದೆ ಧನಸಹಾಯ ನೀಡಿದ್ದ ಹಿನ್ನಲೆ ದೇವಾಲಯದ ನಿರ್ವಹಣಾ ಸಮಿತಿಯ ವತಿಯಿಂದ ಗೌರವಪೂರ್ವಕವಾಗಿ ಉದ್ಯಮಿ ಮಯೂರ ನಾಯಕರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಸದಾ ಕೈಜೋಡಿಸುವುದಾಗಿ ಮಯೂರ ನಾಯಕ ಭರವಸೆ ನೀಡಿದರು. ನಂತರ ದೊಡ್ಡದೇವರ ರಥ ಬೀದಿಯಿಂದ ಅಭಿಮಾನಿಗಳ ಜೊತೆಯಲ್ಲಿ ಮಯೂರ ನಾಯಕರು ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಹೊರ ಆವರಣದಲ್ಲಿ ನೂರಾರು ಜನರು ಜನ್ಮದಿನದ ಶುಭಾಶಯ ಕೋರಿದರು.
ಮಾನವೀಯತೆ ಮೆರೆದ ಮಯೂರ
ಆತ್ಮೀಯರ ಕೋರಿಕೆಯ ಮೇರೆಗೆ ತೀವ್ರ ಶ್ರವಣ ದೋಷ ಮತ್ತಿತರ ಕಾರಣದಿಂದ ಬಳಲುತ್ತಿರುವ ಹಟ್ಟಿಕೇರಿ ಮಾವಿನಕೇರಿ ವ್ಯಾಪ್ತಿಯ ಬಡ ಕುಟುಂಬದ ಮಗುವಿನ ಮನೆಗೆ ತೆರಳಿ ಚಿಕಿತ್ಸೆಗೆ ಅಗತ್ಯವಿರುವ ಧನ ಸಹಾಯವನ್ನು ನೀಡಿದ ಮಯೂರ ನಾಯಕ ಮಾನವೀಯತೆ ಮೆರೆದರು. ಮಯೂರ ನಾಯಕರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಕಾರವಾರದ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಮಧ್ಯಾಹ್ನ ಊಟ ವಿತರಿಸಿದರು. ಪದ್ಮ ಪುಷ್ಪ ವೇದ ವೇದಾಂತ ಗುರುಕುಲದಲ್ಲಿ ಸಾಂಪ್ರದಾಯಿಕ ಮತ್ತು ವೈದಿಕ ವಿಧಿ ವಿಧಾನಗಳೊಂದಿಗೆ ಮಯೂರ ನಾಯಕ ಕುಟುಂಬದ ಒಳಿತಿಗಾಗಿ ಅಭಿಮಾನಿಗಳು ಗೋಪೂಜೆ ನೆರವೇರಿಸಿ, ಗೋಗ್ರಾಸ ಸಮರ್ಪಿಸಿ ಧನ್ಯತೆ ಮೆರೆದರು.
ಸಾಂಸ್ಕೃತಿಕ ಸಂಭ್ರಮ
ನವರಾತ್ರಿ ಪ್ರಯುಕ್ತ ಹಾಗೂ ಮಯೂರ ನಾಯಕರ ಜನ್ಮದಿನದ ಅಂಗವಾಗಿ ಹಿಮಾಲಯ ಶಿಕ್ಷಣ ಸಂಸ್ಥೆಯ ಹೊರ ಆವರಣದಲ್ಲಿ ಸಾಂಸ್ಕೃತಿಕ ದಾಂಡಿಯ ನೃತ್ಯ ಆಯೋಜನೆ ಮಾಡಲಾಗಿತ್ತು. ಹೊರರಾಜ್ಯದ ನೃತ್ಯ ತಂಡ 3 ಗಂಟೆಗಳಿಗೂ ಅಧಿಕಕಾಲ ವಿವಿಧ ಪ್ರಕಾರದ ಸಮೂಹ ನೃತ್ಯ ಪ್ರದರ್ಶಿಸಿ ನೋಡುಗರ ಮನ ಸೂರೆಗೊಂಡಿತು. ಸಿಡಿಮದ್ದುಗಳ ಚಿತ್ತಾರ, ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ, ಬಾನೆತ್ತರಕ್ಕೆ ಹಾರಿದ ಬಿಸಿ ಗಾಳಿ ಬಲೂನ್ ಗಳು ಹಬ್ಬದ ಲೋಕದ ಮೆರಗು ಹೆಚ್ಚಿಸಿತು. ನೆರೆದ ಎಲ್ಲ ಆಪ್ತರಿಗೆ ಪ್ರೀತಿಯ ಔತಣ ನೀಡಿ ಸತ್ಕರಿಸಲಾಯಿತು. ಮುಂಜಾನೆಯಿಂದ ತಡರಾತ್ರಿಯವರೆಗೆ ನಡೆದ ಹತ್ತಾರು ವಿಧಾಯಕ ಕಾರ್ಯಗಳು ಹುಟ್ಟು ಹಬ್ಬವನ್ನು ಅರ್ಥಪೂರ್ಣಗೊಳಿಸಿದವು. ಉದ್ಯಮಿ ಮಯೂರ ನಾಯಕರಿಗೆ ಶುಭ ಕೋರಲು ಅಭಿಮಾನಿಗಳು ಸಿಬ್ಬಂದಿ ಹಾಗೂ ಸ್ನೇಹಿತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದು ಕುಟುಂಬದವರು ಹಾಗೂ ಗೆಳೆಯರ ಬಳಗದವರು ಕೇಕ್ ಕತ್ತರಿಸಿ ಶುಭ ಕೋರಿದರು.

ಗಣ್ಯರ ಅಭಿಪ್ರಾಯ
ಆರ್.ಎನ್ ನಾಯಕ ಮನೆತನ ಸಮಾಜ ಸೇವಾ ಕಾರ್ಯದಲ್ಲಿ ಎಂದಿಗೂ ಮುಂಚೂಣಿಯಲ್ಲಿದೆ. ಉದ್ಯಮಿ ಮಯೂರ ನಾಯಕ ತಂದೆಯ ಆಶಯಗಳನ್ನು ಈಡೇರಿಸುತ್ತಾ ಸಾರ್ವಜನಿಕರಿಗೆ ನೆರವಾಗುತ್ತಾ ಬಂದಿದ್ದಾರೆ. ಅವರಿಗೆ ಸಾವಿರಾರು ಆತ್ಮೀಯ ಅಭಿಮಾನಿಗಳ ಬೆಂಬಲ ಸದಾ ದೊರೆಯುವುದರಲ್ಲಿ ಸಂದೇಹವಿಲ್ಲ ,ಮುಂದಿನ ದಿನಗಳಲ್ಲಿ ಇವರ ಹುಟ್ಟುಹಬ್ಬವನ್ನು ಪರಿಸರ ಪೂರಕ ಸಾಮಾಜಿಕ ಕಳಕಳಿಯ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಮುಂದುವರಿಸೋಣ ಎಂದು ಹೆಸರಾಂತ ನ್ಯಾಯವಾದಿ ಹಾಗೂ ವಕೀಲರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ನಾಯಕ ಬಾಸಗೋಡ ಆಶಯ ವ್ಯಕ್ತಪಡಿಸಿ, ಮಯೂರ್ ನಾಯಕ ಅವರ ತಾಯಿ ಮತ್ತು ಪತ್ನಿ ಹಾಗೂ ಕುಟುಂಬದವರ ಸೇವೆ ಕೊಂಡಾಡಿ, ಕುಟುಂಬದ ಒಳಿತಿಗೆ ಪ್ರಾರ್ಥಿಸಿ ಶುಭ ಕೋರಿದರು.

ಆರ್ ಎನ್ ನಾಯಕ ಸಮಾಜಕ್ಕಾಗಿ ಬದುಕಿದವರು. ಅವರ ನೆಲೆಯಲ್ಲಿ ಸರಳ ಸಜ್ಜನಿಕೆಯ ಸೇವಾ ಗುಣವನ್ನು ಉದಾತ್ತ ಮನೋಭಾವವನ್ನು ಉದ್ಯಮಿ ಮಯೂರ ನಾಯಕ ಅಳವಡಿಸಿಕೊಂಡು ಬಂದಿದ್ದಾರೆ. ಅವರ ಜನ್ಮದಿನದಂದು ಸಂಗಮ ಪೂಜೆ ನೆರವೇರಿಸಿ ಸಮೃದ್ಧಿ ಮತ್ತು ನೆಮ್ಮದಿಗಾಗಿ ಅಭಿಮಾನಿಗಳು ಪ್ರಾರ್ಥಿಸಿರುವುದು ಶ್ಲಾಘನೀಯ. ಉದ್ಯಮಿ ಮಯೂರ ನಾಯಕರ ಜನ್ಮದಿನದಂದು ಹಮ್ಮಿಕೊಂಡ ಅರ್ಥಪೂರ್ಣ ಕಾರ್ಯಕ್ರಮಗಳಿಂದಾಗಿ ಈ ದಿನಕ್ಕೆ ವಿಶೇಷತೆ ಬಂದಿದೆ ಎಂದು ಹಿರಿಯರು ಮತ್ತು ದಿ. ಆರ್ ಎನ್ ನಾಯಕ ಕುಟುಂಬದ ಮಾರ್ಗದರ್ಶಿಗಳು ಹಾಗೂ ಹಿತೈಷಿಗಳು ಆದ ಆರ್ ಟಿ ಮಿರಾಶಿ ಸಂತಸ ವ್ಯಕ್ತಪಡಿಸಿದರು.
ಹಟ್ಟಿಕೇರಿ ಮಾವಿನಕೇರಿಯ ಕಿವುಡ ಮತ್ತು ಮೂಕ ಮಗುವಿನ ಕುಟುಂಬದ ಆರ್ಥಿಕ ನೆರವಿನ ಕೋರಿಕೆ ವಿಚಾರವನ್ನು ಆ ಭಾಗದ ಮುಖಂಡರು ಉದ್ಯಮಿ ಮಯೂರ ನಾಯಕರಿಗೆ ಮನವರಿಕೆ ಮಾಡಿದಾಗ ಮಯೂರ ನಾಯಕರು ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ ಚಿಕಿತ್ಸೆಯ ಬಗ್ಗೆ ವಿಚಾರಿಸಿ ತಕ್ಷಣವೇ ದೇವಾಲಯದಿಂದ ಮಗುವಿನ ಮನೆಗೆ ತೆರಳಿ ನೊಂದ ಕುಟುಂಬಸ್ಥರೊಂದಿಗೆ ಮಾತನಾಡಿ, ಶ್ರವಣ ಸಾಧನ ಕೊಳ್ಳಲು ಅಗತ್ಯ ಧನಸಹಾಯ ಮಾಡಿ, ಧೈರ್ಯ ತುಂಬಿದರು. ಜನ್ಮದಿನದಂದು ಮಯ್ಯೂರ ನಾಯಕ ಅವರು ಮಾಡಿದ ವಿಶಿಷ್ಟ ಸೇವೆ ನಮ್ಮೆಲ್ಲರಿಗೂ ಸ್ಪೂರ್ತಿ ಆಯಿತು. ದಿ. ಆರ್ ಎನ್ ನಾಯಕರ ಆಶಯ ಈಡೇರಿದ ಸಾರ್ಥಕ ಭಾವನೆ ಮೂಡಿತು ಎಂದು ಹಿರಿಯರಾದ ಭಾವಿಕೇರಿಯ ಉದಯ ವಾಮನ ನಾಯಕ ಹೇಳಿದರು.
ಉದ್ಯಮಿ ಮಯೂರ ನಾಯಕರ ಹುಟ್ಟುಹಬ್ಬದ ನಿಮಿತ್ತ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಎಲ್ಲವೂ ಯಶಸ್ವಿಯಾಗಿ ಅರ್ಥಪೂರ್ಣವಾಗಿ ಜರುಗಿದೆ. ಅವರ ಆದರ್ಶ ಗುಣಗಳು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದು ಆ ಹಿನ್ನಲೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು ಎಂದು ಕುಬೇರ ಗ್ರೂಪ್ ಪ್ರಮುಖ ಸಿಬ್ಬಂದಿ ಬೆಲೇಕೇರಿಯ ಪ್ರವೀಣ ನಾಯ್ಕ ಹೇಳಿದರು.
ಹುಟ್ಟು ಹಬ್ಬದ ಆಚರಣೆಗೆ ಮಯೂರ ನಾಯಕರು ಒಪ್ಪದೇ ಇದ್ದಾಗ ಅಭಿಮಾನಿಗಳು ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ಮನವರಿಕೆ ಮಾಡಿದ್ದೆವು. ಕೊನೆಯ ಕ್ಷಣದಲ್ಲಿ ಕಾರ್ಯಕ್ರಮದ ನಿರ್ಧಾರವಾಗಿದ್ದರೂ ಸಾವಿರಾರು ಜನ ಆಗಮಿಸಿ ಯಶಸ್ವಿಯಾಗಿಸಿದ್ದೀರಿ. ಮಯೂರ ನಾಯಕ ಕುಟುಂಬದವರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾದ ಹಾಗೂ ಸಹಕರಿಸಿದ ಎಲ್ಲರಿಗೂ ಆಭಾರಿಯಾಗಿದ್ದೇವೆ, ಎಂದು ಮಯೂರ ನಾಯಕ ಅಭಿಮಾನಿ ಬಳಗದ ಪರವಾಗಿ ಸಂಘಟಕ ಪ್ರಮುಖ ಮಾರುತಿ ಹರಿಕಂತ್ರ ಭಾವನಾತ್ಮಕವಾಗಿ ಮನದ ಇಂಗಿತ ವ್ಯಕ್ತಪಡಿಸಿ ತಮ್ಮ ಸಂತಸ ತೋರ್ಪಡಿಸಿದರು.
ದೇಣಿಗೆ ಮೂಲಕ ಪ್ರೀತಿ ಹಂಚಿಕೆ
ಇತ್ತೀಚೆಗೆ ಬಾವಿಕೇರಿಯ ಇತಿಹಾಸ ಪ್ರಸಿದ್ಧ ಗರಡಿ ಮಹಾಸತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ರೂ. 10 ಲಕ್ಷದ ಉದಾರ ದೇಣಿಗೆ ನೀಡಿದ್ದ ಮಯೂರ ನಾಯಕ, ಬೆಟ್ಟುಳಿಯ ನಾಮಧಾರಿ ಸಮಾಜದ ಸಭಾಭವನಕ್ಕೂ ರೂ. 2 ಲಕ್ಷ ದೇಣಿಗೆ ನೀಡಿ, ಆಯಾ ಭಾಗದ ಜನರೊಂದಿಗೆ ತಮ್ಮ ಪ್ರೀತಿ ಹಂಚಿಕೊಂಡಿದ್ದರು.
ಸಾವಿರಾರು ಜನರಿಂದ ಶುಭಾಶಯ

ಮಯೂರ ನಾಯಕ ಅವರ ತಾಯಿ ಲತಾ ಅರಮನೆ, ಧರ್ಮ ಪತ್ನಿ ಡಾ. ಶೃತಿ ಮಯೂರ ನಾಯಕ, ಮಕ್ಕಳು, ಕುಟುಂಬ ವರ್ಗ, ಬಂಧು ಬಳಗ, ದಿ. ಆರ್ ಎನ್ ನಾಯಕ ಕುಟುಂಬದ ಆಪ್ತರು, ಹಿತೈಷಿಗಳು, ಅಭಿಮಾನಿಗಳು, ವಿವಿಧ ಸಮಾಜ ಹಾಗೂ ಸಂಘ ಸಂಸ್ಥೆಗಳ ಪ್ರಮುಖರು, ಮಾಜಿ ಜನಪ್ರತಿನಿಧಿಗಳು, ಕುಬೇರ ಗ್ರೂಪ್ ಸಿಬ್ಬಂದಿ ಪರಿವಾರ, ಸೇರಿದಂತೆ ತಾಲೂಕು ಜಿಲ್ಲೆ ಹೊರ ರಾಜ್ಯದವರು ಸೇರಿದಂತೆ ಸಾವಿರಾರು ಜನರು ಮಯೂರ ನಾಯಕ ಹುಟ್ಟುಹಬ್ಬದ ಬೇರೆ ಬೇರೆ ಸಂದರ್ಭಗಳಲ್ಲಿ ಜೊತೆಯಾಗಿ, ಶುಭ ಕೋರಿ, ಭವಿಷ್ಯದಲ್ಲಿ ಈ ಕುಟುಂಬಕ್ಕೆ ಸಕಲ ಸೌಭಾಗ್ಯ ನೆಮ್ಮದಿ ಕೀರ್ತಿ ಒಲಿದು ಬಂದು ಪ್ರೀತಿ ವಿಶ್ವಾಸಗಳು ಇನ್ನಷ್ಟು ಹೆಚ್ಚುವಂತಾಗಲಿ ಹಾಗೂ ಈ ಕುಟುಂಬದ ಸಾಮಾಜಿಕ ಕಳಕಳಿ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿ ಶ್ರೀ ದೇವರಲ್ಲಿ ಸಕಲರ ಒಳಿತಿಗೆ ಪ್ರಾರ್ಥಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ












