- ಆರು ದಿನಗಳ ಸಾಂಸ್ಕೃತಿಕ ಹಬ್ಬಕ್ಕೆ ಅಂಕೋಲಾ ಸಜ್ಜು
- ಜಸ್ ಕರಣ್ ಸಿಂಗ್, ಆಶಾ ಭಟ್ ಸೇರಿದಂತೆ ಗಣ್ಯ ಕಲಾವಿದರ ಝಲಕ್!
ಅಂಕೋಲಾ: ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ಅಂಕೋಲಾ ತಾಲೂಕಿನಲ್ಲಿ ಅಂಕೋಲಾ ಸಾಂಸ್ಕೃತಿಕ ಕಲಾಬಳಗ ಉತ್ತರ ಕನ್ನಡ ಸಂಘಟನೆಯ ವತಿಯಿಂದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ಗೌರವಾಧ್ಯಕ್ಷತೆಯಲ್ಲಿ ಅಂಕೋಲಾ ಕರಾವಳಿ ಉತ್ಸವ 2025 ಕಾರ್ಯಕ್ರಮ ನವೆಂಬರ್ 5 ರಿಂದ ನವೆಂಬರ 10 ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ಸಂಘಟನೆಯ ಪ್ರಮುಖ ಜಗದೀಶ ನಾಯಕ ಮೊಗಟಾ ಹೇಳಿದರು.
ಪಟ್ಟಣದ ಗುರುಪ್ರಸಾದ ಸಭಾಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂಕೋಲಾ ಪಟ್ಟಣದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಆರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಸ್ತು ಪ್ರದರ್ಶನ ಮತ್ತು ಮಾರಾಟ,ಆಕರ್ಷಕ ಮಳಿಗೆಗಳು,ಅಮ್ಯೂಸಮೆಂಟ್ ಪಾರ್ಕ್ ಮೊದಲಾದ ವೈಭವ ಕಾಣಸಿಗಲಿದೆ ಎಂದರು.
ರಾಜ್ಯ, ರಾಷ್ಟ್ರ ಮಟ್ಟದ ಪ್ರತಿಭೆಗಳ ಒಗ್ಗೂಡಿಕೆ
ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕಲಾವಿದರ ಕಾರ್ಯಕ್ರಮಗಳ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೂ ಹಾಗೂ ಜಿಲ್ಲಾ, ರಾಜ್ಯ , ರಾಷ್ಟ್ರಮಟ್ಟದ ಕೆಲ ಪ್ರತಿಭೆಗಳಿಗೂ ಉತ್ತಮ ವೇದಿಕೆ ದೊರಕಲಿದ್ದು ಶಾಲಾ ವಿದ್ಯಾರ್ಥಿಗಳಿಗೂ ಯಾವುದೇ ಪರೀಕ್ಷೆಗಳು ಇಲ್ಲದ ಅತ್ಯಂತ ಸೂಕ್ತ ಸಮಯದಲ್ಲಿ ಎಲ್ಲಾ ನಿಯಮಗಳ ಪಾಲನೆಯೊಂದಿಗೆ ಉತ್ಸವವನ್ನು ನಡೆಸಲಾಗುವುದು ಎಂದರು.
ಸಂಘಟಕ ಪ್ರಮುಖ ಸಂಜಯ ನಾಯ್ಕ ಭಾವಿಕೇರಿ ಮಾತನಾಡಿ ಉತ್ಸವಕ್ಕೆ ಸಂಬಂಧಿಸಿದಂತೆ ವಿವಿಧ ಸಮಿತಿಗಳನ್ನು ರಚಿಸಿ ತಾಲೂಕಿನ ಅನುಭವಿಗಳ ಸಲಹೆ ಸೂಚನೆ ಪಡೆದು ಉತ್ಸವವನ್ನು ಸಂಘಟಿಸಲಾಗುವುದು ತಾಲೂಕಿನ ಸಮಸ್ತ ಜನತೆ ಸಹಕಾರ ನೀಡಬೇಕು ಎಂದರು.
ಪ್ರಮುಖ ಕಲಾವಿದರು
ಮೂರು ಮುತ್ತು ತಂಡ; ಹಾಸ್ಯ ಚಟಾಕಿ: ನವೆಂಬರ್ 5
ಜ್ಯೂನಿಯರ್ ಪುನೀತ್ ರಾಜ್ ರಸಮಂಜರಿ; ನವೆಂಬರ್ 6
ಮಂಗಳೂರು ತಂಡದಿಂದ ರಸಮಂಜರಿ; ನವೆಂಬರ್ 7
ಪ್ರಾಣೇಶ ತಂಡದಿಂದ ನಗೆ ಹಬ್ಬ; ನವೆಂಬರ್ 8
ಜಸ್ ಕರಣ್ ಸಿಂಗ್ ಮತ್ತು ಆಶಾ ಭಟ್ ತಂಡ; ನವೆಂಬರ್ 9
ಹನುಮಂತು ಮತ್ತು ಪ್ರಥ್ವಿ ಭಟ್; ನವೆಂಬರ್ 10
ಸಂಘಟಕ ಪ್ರಮುಖರುಗಳಾದ ನಿಲೇಶ ನಾಯ್ಕ ಭಾವಿಕೇರಿ, ರಜತ್ ನಾಯ್ಕ ಕನಸಿಗದ್ದೆ, ಸುಭಾಷ ನಾಯ್ಕ ಹೊನ್ನೆಕೇರಿ, ಗ್ರಾಪಂ ಮಾಜಿ ಅಧ್ಯಕ್ಷ ಹಾರವಾಡದ ಮಂಜುನಾಥ ಟಾಕೇಕರ್, ಪುರಸಭೆ ಸದಸ್ಯರಾದ ವಿಶ್ವನಾಥ ನಾಯ್ಕ, ಶ್ರೀಧರ ನಾಯ್ಕ, ಮಂಗೇಶ ಆಗೇರ, ಯುವ ಪ್ರಮುಖರಾದ ವಿನಾಯಕ ನಾಯ್ಕ, ರಘುವೀರ, ಸಾರ್ಥಕ ಮತ್ತಿತರರು ಉಪಸ್ಥಿತರಿದ್ದರು. ನವೆಂಬರ್ 5 ರಂದು ಮೂರು ಮುತ್ತು ಕಲಾವಿದರಿಂದ ಹಾಸ್ಯ ಚಟಾಕಿ, 6ರಂದು ಜ್ಯೂನಿಯರ್ ಪುನೀತ್ ರಾಜ ರಸಮಂಜರಿ, 7ರಂದು ಮಂಗಳೂರು ತಂಡದಿಂದ ರಸಮಂಜರಿ, 8ರಂದು ಪ್ರಾಣೇಶ ತಂಡದಿಂದ ನಗೆ ಹಬ್ಬ , 9ರಂದು ಜೆಸ್ ಕರಣ ಸಿಂಗ್ ಹಾಗೂ ಆಶಾ ಭಟ್ ತಂಡದಿಂದ ರಸಮಂಜರಿ, 10 ರಂದು ಬಿಗ್ ಬಾಸ್ ಖ್ಯಾತಿಯ ಹನುಮಂತು ಮತ್ತು ಪ್ರಥ್ವಿ ಭಟ್ ತಂಡದಿಂದ ಕಾರ್ಯಕ್ರಮ,ಇವು ಇಷ್ಟೇ ಅಲ್ಲದೆ ಪ್ರತಿದಿನ ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಂಘಟಕ ಪ್ರಮುಖರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಅಂಕೋಲಾ ಕರಾವಳಿ ಉತ್ಸವಕ್ಕೆ ಭರದ ಸಿದ್ಧತೆ ಆರಂಭವಾಗಿದ್ದು,ಜನತೆಯೂ ಈ ಕಾರ್ಯಕ್ರಮದತ್ತ ನಿರೀಕ್ಷೆ ಇಟ್ಟಂತಿದೆ.
- ಉತ್ಸವ ದಿನಾಂಕ: ನವೆಂಬರ್ 5 ರಿಂದ 10 ರವರೆಗೆ — 6 ದಿನಗಳ ಸಾಂಸ್ಕೃತಿಕ ಸಡಗರ
- ಸ್ಥಳ: ಜೈಹಿಂದ್ ಹೈಸ್ಕೂಲ್ ಮೈದಾನ, ಅಂಕೋಲಾ
- ಗೌರವಾಧ್ಯಕ್ಷೆ: ಮಾಜಿ ಶಾಸಕಿ ರೂಪಾಲಿ ನಾಯ್ಕ
- ಆಯೋಜಕರು: ಅಂಕೋಲಾ ಸಾಂಸ್ಕೃತಿಕ ಕಲಾಬಳಗ — ಉತ್ತರ ಕನ್ನಡ
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ












