- ಬೆಂಗಳೂರು ತೊರೆದು ಊರಿಗೆ ಬಂದ ಯುವ ವೈದ್ಯೆ
- ಡಾ. ಸತ್ಯಶ್ರೀ ಕುಡಾಲಕರ್ನಿಂದ ಆರೋಗ್ಯ ಸೇವೆಯ ಹೊಸ ಹೆಜ್ಜೆ
ಅಂಕೋಲಾ: ಪಟ್ಟಣದ ಶಾಂತಾದುರ್ಗಾ ದೇವಸ್ಥಾನದ ಎದುರಿನ ಮುಖ್ಯರಸ್ತೆ ಅಂಚಿನ ಕಟ್ಟಡದಲ್ಲಿ ‘ಉತ್ತಾರಾ ಫಿಸಿಯೋಥೆರಪಿ ಮತ್ತು ನ್ಯೂಟ್ರಿಷನ್ ಸೆಂಟರ್’ ಮಾ.7ರಂದು ಶುಭಾರಂಭಗೊಂಡಿದ್ದು, ಅಂಕೋಲಾ ಹಾಗೂ ಸುತ್ತಮುತ್ತಲಿನ ಜನರಿಗೆ ಆಧುನಿಕ ಆರೋಗ್ಯ ಸೇವೆ ಒದಗಿಸುವ ಹೊಸ ಪ್ರಯತ್ನವಾಗಿ ಗಮನ ಸೆಳೆಯುತ್ತಿದೆ.
ಉತ್ತಮವಾಗಿ ಬದುಕಿ: ಬಲವಾಗಿ ಬನ್ನಿ
“ಉತ್ತಮವಾಗಿ ಬದುಕಿ – ಬಲವಾಗಿ ಬನ್ನಿ” ಎಂಬ ಧ್ಯೇಯವಾಕ್ಯದೊಂದಿಗೆ ಫಿಸಿಯೋಥೆರಪಿ ಕ್ಷೇತ್ರದಲ್ಲಿ ದಶಕದ ಅನುಭವ ಹೊಂದಿರುವ ಡಾ. ಸತ್ಯಶ್ರೀ ಕುಡಾಲಕರ್ ತಮ್ಮ ಪತಿ ಅಮೋಘ ಕುಡಾಲಕರ್ ಹಾಗೂ ಕುಟುಂಬದವರ ಬೆಂಬಲದೊಂದಿಗೆ ಈ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಮೂಳೆ ಮತ್ತು ಸ್ನಾಯು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಸಮರ್ಪಕ ಚಿಕಿತ್ಸೆ ಹಾಗೂ ಆರೋಗ್ಯ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೇಂದ್ರ ಆರಂಭಿಸಲಾಗಿದೆ.
ಅನೇಕ ಚಿಕಿತ್ಸಾ ವಿಧಾನಗಳ ವ್ಯವಸ್ಥೆ
ಕೇಂದ್ರದಲ್ಲಿ ಮೂಳೆ ಹಾಗೂ ಸ್ನಾಯು ಸಮಸ್ಯೆಗಳು, ಬೆನ್ನು ನೋವು, ಕುತ್ತಿಗೆ ನೋವು, ಸಯಾಟಿಕಾ, ಸ್ಲಿಪ್ ಡಿಸ್ಕ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ನೋವು ನಿವಾರಣೆಗಾಗಿ ವಿವಿಧ ಆಧುನಿಕ ಫಿಸಿಯೋಥೆರಪಿ ವಿಧಾನಗಳು, ಕಪ್ಪಿಂಗ್ ಥೆರಪಿ, ಡ್ರೈ ನೀಡ್ಲಿಂಗ್ ಸೇರಿದಂತೆ ಅನೇಕ ಚಿಕಿತ್ಸಾ ವಿಧಾನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಸತ್ಯಶ್ರೀ ಕುಡಾಲಕರ್ ತಿಳಿಸಿದ್ದಾರೆ.
ಮೂಳೆ ಮುರಿತದ ನಂತರದ ಪುನರ್ವಸತಿ ಚಿಕಿತ್ಸೆ, ಮೂಳೆ ಜಾರಿಕೆ, ಪಾರ್ಕಿನ್ಸನ್ ಕಾಯಿಲೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಸಹ ಇಲ್ಲಿ ಚಿಕಿತ್ಸೆ ದೊರೆಯಲಿದೆ. ಚಿಕಿತ್ಸಾ ಕೇಂದ್ರವು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಸಂಜೆ 4.30 ರಿಂದ 7.30ರವರೆಗೆ ಕಾರ್ಯನಿರ್ವಹಿಸಲಿದೆ. ಆರೋಗ್ಯ ಸಮಸ್ಯೆ ಹೊಂದಿರುವವರು ಭೇಟಿ ನೀಡಿದರೆ ಅವರ ಸಮಸ್ಯೆಗಳಿಗೆ ತಕ್ಕಂತೆ ಸಲಹೆ, ವ್ಯಾಯಾಮ ಮಾರ್ಗದರ್ಶನ ಹಾಗೂ ಪೌಷ್ಟಿಕ ಆಹಾರ ಕುರಿತ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ದಿವಂಗತ ಗಣಪಯ್ಯ ಕುಡಾಲಕರ ಅವರು ಸ್ಥಾಪಿಸಿದ್ದ ಅಲಂಕಾರ್ ಜ್ಯುವೆಲರ್ಸ್, ಅಂಕೋಲಾದಲ್ಲಿ ಅಷ್ಟೇ ಅಲ್ಲದೇ ಜಿಲ್ಲೆ ಹಾಗೂ ಇತರೆಡೆಯ ಗ್ರಾಹಕರನ್ನು ತನ್ನತ್ತ ಸೆಳೆದು ಕೊಂಡು ಚಿನ್ನ ಬೆಳ್ಳಿ ವಜ್ರಾಭರಣ ಮಾರಾಟ ಕ್ಷೇತ್ರದಲ್ಲಿ ತನ್ನ ವಿಶ್ವಾಸಾರ್ಹ ಸೇವೆಗೆ ಹೆಸರಾಗಿದ್ದು , ಅದೇ ಕುಟುಂಬದ ಸದಸ್ಯರಾಗಿರುವ ಡಾ. ಸತ್ಯಶ್ರೀ ಕುಡಾಲಕರ, ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವ ವಿಶ್ವಾಸ ಹಲವರಲ್ಲಿದೆ. ಇಂದು ಉದ್ಯೋಗಕ್ಕಾಗಿ ಊರು ತೊರೆದು ಬೆಂಗಳೂರು ಮತ್ತಿತರ ಮಹಾನಗರ ಸೇರುವವರ ಸಂಖ್ಯೆ ಹೆಚ್ಚಾಗಿರುವ ನಡುವೆಯೇ , ತಾವು ಕಲಿತ ವಿದ್ಯೆ ಊರಿನವರ ಸೇವೆಗೂ ಮೀಸಲಾಗಬೇಕು ಎಂಬ ಸದುದ್ದೇಶದಿಂದ ರಾಜಧಾನಿ ಬೆಂಗಳೂರನ್ನು ತೊರೆದು ಊರಿಗೆ ಬಂದು ನೆಲೆಸಿ ಸೇವೆ ನೀಡಲು ಮುಂದಾಗಿರುವ ಈ ಯುವ ವೈದ್ಯೆಯನ್ನು ಮತ್ತು ಅವರ ಕುಟುಂಬ ವರ್ಗದವರನ್ನು ಅಭಿನಂದಿಸಲೇಬೇಕಿದೆ.
ಮಾ.7ರ ಶನಿವಾರ ಶುಭ ಮುಹೂರ್ತದಲ್ಲಿ ಕುಟುಂಬ ಸದಸ್ಯರು, ಬಂಧು–ಮಿತ್ರರು, ಆಪ್ತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ದೀಪ ಬೆಳಗುವ ಸರಳ ಕಾರ್ಯಕ್ರಮದ ಮೂಲಕ ಕೇಂದ್ರವನ್ನು ಉದ್ಘಾಟಿಸಲಾಗಿದ್ದು, ಸುಂದರ ಮತ್ತು ಅಚ್ಚುಕಟ್ಟಾದ ಒಳಾಂಗಣ ವಿನ್ಯಾಸದಲ್ಲಿರುವ ಈ ಫಿಸಿಯೋಥೆರಪಿ ಸೆಂಟರ್, ಸಾರ್ವಜನಿಕರ ಆರೋಗ್ಯ ಸೇವೆಯ ಮೂಲಕ ಮತ್ತಷ್ಟು ಜನಮನ ಗೆಲ್ಲಲಿ ಹಾಗೂ ಅಂಕೋಲಾದಲ್ಲಿ ಇದು ಇನ್ನಷ್ಟು ಯುವ ಪ್ರತಿಭೆಗಳಿಗೆ ಇಲ್ಲಿಯೇ ಸೇವೆ ನಡೆಸಲು ಪ್ರೇರೆಪಣೆ ಯಾಗಲಿ ಎನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.
ಆರೋಗ್ಯಕರ ಬದುಕಿಗೆ ಫಿಸಿಯೋಥೆರಪಿ ಅಗತ್ಯ
ಇಂದಿನ ವೇಗದ ಜೀವನಶೈಲಿ, ದೀರ್ಘ ಕಾಲ ಕುಳಿತು ಕೆಲಸ ಮಾಡುವ ಪದ್ಧತಿ ಹಾಗೂ ವ್ಯಾಯಾಮದ ಕೊರತೆಯಿಂದ ಬೆನ್ನು ನೋವು, ಕುತ್ತಿಗೆ ನೋವು, ಸಯಾಟಿಕಾ, ಮೊಣಕಾಲು ನೋವು ಸೇರಿದಂತೆ ಮೂಳೆ ಮತ್ತು ಸ್ನಾಯು ಸಮಸ್ಯೆಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಇಂತಹ ಸಮಸ್ಯೆಗಳಿಗೆ ಔಷಧಿ ಮಾತ್ರವಲ್ಲದೆ, ನಿಯಮಿತ ವ್ಯಾಯಾಮ ಮತ್ತು ವೈಜ್ಞಾನಿಕ ಚಿಕಿತ್ಸೆ ಅತ್ಯಂತ ಅಗತ್ಯ.
ಫಿಸಿಯೋಥೆರಪಿ ಚಿಕಿತ್ಸೆ ನೋವು ಕಡಿಮೆ ಮಾಡುವುದಷ್ಟೇ ಅಲ್ಲದೆ ದೇಹದ ಚಲನವಲನವನ್ನು ಸುಧಾರಿಸುವುದು, ಸ್ನಾಯುಗಳನ್ನು ಬಲಪಡಿಸುವುದು ಹಾಗೂ ಶಸ್ತ್ರಚಿಕಿತ್ಸೆ ಅಗತ್ಯವಾಗದಂತೆ ತಡೆಯಲು ಸಹ ನೆರವಾಗುತ್ತದೆ. ಅಪಘಾತಗಳ ನಂತರದ ಪುನರ್ವಸತಿ, ಮೂಳೆ ಮುರಿತದ ಬಳಿಕ ಚಲನವಲನ ಸುಧಾರಣೆ, ವಯೋಸಹಜ ಸಮಸ್ಯೆಗಳು ಮತ್ತು ಕ್ರೀಡಾಪಟುಗಳ ಗಾಯಗಳಿಗೆ ಸಹ ಫಿಸಿಯೋಥೆರಪಿ ಪರಿಣಾಮಕಾರಿ ಚಿಕಿತ್ಸೆ ಎಂದು ತಜ್ಞರು ಹೇಳುತ್ತಾರೆ.
ಸರಿಯಾದ ವ್ಯಾಯಾಮ, ಸೂಕ್ತ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ಪದ್ಧತಿ ಪಾಲಿಸುವುದರಿಂದ ಆರೋಗ್ಯಕರ ಜೀವನಶೈಲಿ ಸಾಧ್ಯವಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ







