ಅಂಕೋಲಾ: ವಧೆ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ, ಎರಡು ಭಾರೀ ಗಾತ್ರದ ಗೀರ್ ತಳಿಯ ಹೋರಿಗಳಿಗೆ ಕೊನೆಗೂ ಸುರಕ್ಷಿತ ಆಶ್ರಯ ದೊರೆತಂತಿದ್ದು, ಕುಮಟಾ ಉಪವಿಭಾಗಾಧಿಕಾರಿಗಳ ಅನುಮತಿ ಬಳಿಕ ಹೋರಿಗಳನ್ನು ಗೋಶಾಲೆಗೆ ಕಳಿಸಿ, ಮೂಕ ಪ್ರಾಣಿಗಳಿಗೆ ಜೀವದಾನ ನೀಡಿದಂತಾಗಿದ್ದು, ಈ ವಿಚಾರ ಪ್ರಾಣಿಪ್ರಿಯ ಸಾರ್ವಜನಿಕ ವಲಯದಲ್ಲಿ ನೆಮ್ಮದಿ ತಂದoತಿದೆ.
ಸ್ಥಳೀಯವಾಗಿ ಬೀಜದ ಹೋರಿ ಎಂದು ಕರೆಯಲಾಗುವ ಈ ಗೀರ್ ಹೋರಿಗಳು ಸಂತಾನೋತ್ಪತ್ತಿ ದೃಷ್ಟಿಯಿಂದ ಹೆಚ್ಚಿನ ಮೌಲ್ಯ ಹೊಂದಿವೆ ಎನ್ನಲಾಗಿದ್ದು, ಹೀಗಾಗಿಯೇ ಪ್ರಾಯದ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯ ನಿರ್ಮಿಸಿ ಕೊಡುತ್ತದೆ ಎನ್ನಲಾಗುತ್ತದೆ. ಅಂಕೋಲಾಕ್ಕೆ ತರಲಾದ ಈ ಭಾರೀ ಗಾತ್ರ ಹಾಗೂ ಅವುಗಳ ಎತ್ತರ ನೋಡಲು ಪ್ರತಿದಿನ ನೂರಾರು ಜನರು ಆಗಮಿಸುತ್ತಿದ್ದರು. ಇದೇ ವೇಳೆ ಶಾಸಕ ಸತೀಶ್ ಸೈಲ್ ಭೇಟಿ ನೀಡಿ ಹೋರಿಗಳಿಗೆ ಸಾಂಕೇತಿಕವಾಗಿ ಮೇವು ನೀಡಿ, ಅವುಗಳ ಆರೋಗ್ಯ ಕಾಳಜಿಗೆ ಹೆಚ್ಚಿನ ಒತ್ತು ನೀಡುವಂತೆ ಪಶುವೈದ್ಯಕೀಯ ಸಿಬ್ಬಂದಿಗಳಿಗೆ ಸೂಚಿಸಿ,ಪೊಲೀಸರಿಗೂ ಕೆಲ ಅಗತ್ಯ ಸೂಚನೆ ನೀಡಿದ್ದರು.
ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ
ಒಟ್ಟಿನಲ್ಲಿ ಕಟುಕರ ತಾಣ ಸೇರಿದ್ದರೆ ಅವರ ಕೈಯಿಂದ ಪ್ರಾಣ ಬಲಿಗೆ ಸಿದ್ಧವಾಗಬೇಕಿದ್ದ ಈ ಜಾನುವಾರುಗಳನ್ನು, ಹಾಗಾಗದಂತೆ ತಡೆದು ಬಳಿಕ ಹೋರಿಗಳ ಆರೈಕೆಗೆ ಪೊಲೀಸ್ ಸಿಬ್ಬಂದಿಗಳು, ಗೃಹರಕ್ಷಕ ದಳ, ಪಶುವೈದ್ಯರು ಹಾಗೂ ಸಿಬ್ಬಂದಿಗಳು, ಗೋಪ್ರೇಮಿಗಳು ಮೂಕ ಪ್ರಾಣಿಗಳಿಗೆ ದಯೆ ಹಾಗೂ ಪ್ರೀತಿ ತೋರಿ ಉತ್ತಮ ಸೇವೆ ಸಲ್ಲಿಸಿದ್ದು ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಗೋಶಾಲೆಯ ಕುಟುಂಬವೂ ಹೋರಿಗಳ ಸಾಕಾಣಿಕೆಗೆ ಮುಂದೆ ಬಂದಿರುವುದು ಶ್ಲಾಘನೀಯ ಎಂದು ಹಲವರು ಸರ್ವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಪ್ರಾಣಿ ಪ್ರಿಯರ ಮನ ಗೆದ್ದು ನೆಮ್ಮದಿ ಮೂಡಿಸಿದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ












